Топ-100
Back

ⓘ ಅಲೆಮಾರಿಜನ ಜೀವನ. ಒಂದು ಕಡೆ ಬಹುಕಾಲ ನೆಲೆಯಾಗಿ ನಿಲ್ಲದೆ, ಜೀವನೋಪಾಯಕ್ಕಾಗಿ ಸ್ಥಳದಿಂದ ಸ್ಥಳಕ್ಕೆ ಅಲೆಯುವ ಜನಕ್ಕೆ ಅಲೆಮಾರಿಗಳೆನ್ನುತ್ತಾರೆ. ಪ್ರಾಚೀನ ಮಾನವನ ಇತಿಹಾಸವನ್ನು ಪರೀಶೀಲಿಸಿದಾಗ, ಆ ..ಅಲೆಮಾರಿಜನ ಜೀವನ
                                     

ⓘ ಅಲೆಮಾರಿಜನ ಜೀವನ

ಒಂದು ಕಡೆ ಬಹುಕಾಲ ನೆಲೆಯಾಗಿ ನಿಲ್ಲದೆ, ಜೀವನೋಪಾಯಕ್ಕಾಗಿ ಸ್ಥಳದಿಂದ ಸ್ಥಳಕ್ಕೆ ಅಲೆಯುವ ಜನಕ್ಕೆ ಅಲೆಮಾರಿಗಳೆನ್ನುತ್ತಾರೆ. ಪ್ರಾಚೀನ ಮಾನವನ ಇತಿಹಾಸವನ್ನು ಪರೀಶೀಲಿಸಿದಾಗ, ಆತ ತನ್ನ ಜೀವನೋಪಾಯಕ್ಕಾಗಿ ಬೇಟೆಯಾಡುವುದು, ಮೀನು ಹಿಡಿಯುವುದು, ವ್ಯವಸಾಯ, ಪಶುಪಾಲನೆ-ಮುಂತಾದುವನ್ನು ಅವಲಂಬಿಸಿಕೊಂಡಿದ್ದದು ಕಂಡುಬರುತ್ತದೆ. ವ್ಯವಸಾಯ ಮತ್ತು ಪಶುಪಾಲನೆಗೆ ನೀರು ಅತ್ಯಗತ್ಯ. ಮೀನು ಹಿಡಿಯುವುದಕ್ಕೂ ಬೇಟೆಗೂ ತಕ್ಕ ಸನ್ನಿವೇಶ ಸದಾಕಾಲವೂ ಒಂದೇ ಸ್ಥಳದಲ್ಲಿ ದೊರೆಯದಿದ್ದಾಗ, ಜಲದ ಅಭಾವ ತಲೆದೋರಿದಾಗ ಅವನ್ನರಸಿಕೊಂಡು ಮನುಷ್ಯ ಅಲೆದಾಡುವುದು ಸ್ವಾಭಾವಿಕ. ಈ ದೃಷ್ಟಿಯಿಂದ ಆದಿಮಾನವ ಅಲೆಮಾರಿಯಾಗಿ ತನ್ನ ಜೀವನವನ್ನು ಪ್ರಾರಂಭಿಸಿದನೆನ್ನಬಹುದು. ಹಳೆ ಮತ್ತು ನವ ಶಿಲಾಯುಗದ ಜನ ಚೂಪಾದ ಕಲ್ಲಿನ ಆಯುಧಗಳಿಂದ ಮೃಗಗಳನ್ನು ಬೇಟೆಯಾಡಿ, ಗೆಡ್ಡೆಗೆಣಸುಗಳನ್ನು ಅಗೆದು ತಿಂದು ಜೀವನ ನಡೆಸುತ್ತಿದ್ದರಾದ ಕಾರಣ ಅಲೆಮಾರಿತನ ಅವರಿಗೆ ಸ್ವಾಭಾವಿಕವಾಗಿತ್ತು. ಬರಬರುತ್ತ ನಾಗರಿಕತೆ ಹಾಗೂ ಸಂಸ್ಕೃತಿ ಹುಟ್ಟಿ ಬೆಳೆದಂತೆ ಅವರಲ್ಲಿ ಕೆಲವು ಜನ ಸ್ಥಿರ ವಸತಿಗಳನ್ನು ಕಲ್ಪಿಸಿಕೊಂಡು ವಾಸಿಸತೊಡಗಿದರೂ ಮತ್ತೆ ಕೆಲವರು ಅಲೆಮಾರಿ ಜೀವನವನ್ನೇ ಮುಂದುವರೆಸಿದರು. ನಾಗರಿಕ ಮಾನವ ಹಳ್ಳಿ, ಊರು, ಪಟ್ಟಣಗಳನ್ನು ನಿರ್ಮಿಸಿಕೊಂಡು ನೆಲೆನಿಲ್ಲಲು ಪ್ರಾರಂಭಿಸಿದಂತೆ ಸುತ್ತಲಿನ ಅರಣ್ಯಗಳು ಹಾಳಾದುವಲ್ಲದೆ ಅವನ್ನೇ ಆಶ್ರಯಿಸಿದ್ದ ಪ್ರಾಣಿಗಳೂ ಇಲ್ಲವಾದುವು; ಅಥವಾ ಕಾಡಿನೊಂದಿಗೆ ಹಿಂದೆ ಹಿಂದೆ ಸರಿದು ದೂರದ ಅರಣ್ಯಗಳನ್ನು ಸೇರಿದುವು. ನಾಗರಿಕ ಜೀವನದ ಬಗ್ಗೆ ಅವರಿಗಿದ್ದ ಸಹಜ ಭಯ ಮತ್ತು ತಮ್ಮ ಜೀವನಕ್ರಮ ದಲ್ಲಿ ಅವರಿಗಿದ್ದ ಆಸ್ಥೆ-ಈ ಕಾರಣಗಳಿಂದಾಗಿ ಅವರು ಹಾಗೆ ಮಾಡಿರಬಹುದು. ಪ್ರಪಂಚದ ಎಲ್ಲ ಭಾಗಗಳಲ್ಲೂ ಅಲೆಮಾರಿ ಜೀವನ ನಡೆಸುವ ಜನಾಂಗಗಳು ಇವತ್ತಿಗೂ ಕಂಡು ಬರಲು ಇದೇ ಕಾರಣವಿರಬೇಕು. ಇದಕ್ಕೆ ಉತ್ತರ ಅಮೆರಿಕದ ಎಸ್ಕಿಮೊಗಳು, ಆಸ್ಟ್ರೇಲಿಯದ ಮೂಲನಿವಾಸಿಗಳು, ಆಫ್ರಿಕದ ಬುಷ್ ಜನ, ಅಂಡಮಾನಿನ ನಿವಾಸಿಗಳು-ಮುಂತಾದವರು ಇದಕ್ಕೆ ಉತ್ತಮ ನಿದರ್ಶನ. ನಿಂತ ಕಡೆ ನಿಲ್ಲದೆ ಸದಾಕಾಲ ಅಲೆಯುವುದರಲ್ಲಿ ಅಗ್ರಗಣ್ಯರೆಂದರೆ ಜಿಪ್ಸಿಗಳು. ಇವರು ಪ್ರಪಂಚದ ಎಲ್ಲ ಭಾಗಗಳಲ್ಲೂ ಕಂಡುಬರುವರು. ಅಲೆಮಾರಿಜೀವನದ ದೃಷ್ಟಾಂತವಾಗಿ ಬೇಟೆಯಾಡುವ, ಗೆಡ್ಡೆಗೆಣಸು ಕೂಡಿಡುವ, ಪಶುಪಾಲನೆಯಿಂದ ಜೀವಿಸುವ ಜನರನ್ನು ನೋಡಬಹುದು. ಅಲೆಮಾರಿಜೀವನದ ಜೀವಾಳವೆಂದರೆ ಪಶುಪಾಲನಾವೃತ್ತಿ. ದ್ರಾವಿಡರು ಭಾರತಕ್ಕೆ ವಲಸೆಬಂದವರೆಂದು ಹೇಳುತ್ತಾರೆ. ಅವರಿಗಿಂತ ಹಿಂದಿನವರಾದ ಕೋಲರೂ ಅಲೆಮಾರಿಗಳೇ. ಅನಂತರ ಮಧ್ಯ ಏಷ್ಯದಿಂದ ಆರ್ಯರು ವಲಸೆ ಬಂದರು. ಅವರ ಮುಖ್ಯ ವೃತ್ತಿ ಪಶುಪಾಲನೆಯಾಗಿತ್ತು. ದನಗಳ ಮೇವು ನೀರಿಗಾಗಿ ಅವರು ದೇಶದಿಂದ ದೇಶಕ್ಕೆ ಅಲೆಯುತ್ತ ಬಂದರು.

                                     

1. ಭಾರತದಲ್ಲಿ ಕಂಡುಬರುವ ಅಲೆಮಾರಿ ಜನಾಂಗಗಳು

 • ಮಣ್ಣು ಒಡ್ಡರು ಮಣ್ಣಿನ ಮನೆಗೆಲಸ, ಬಾವಿ ತೋಡುವ ಕೆಲಸ, ರಸ್ತೆ ಕೆಲಸಕ್ಕಾಗಿ ಊರಿಂದೂರಿಗೆ ಹೋಗುತ್ತಾರೆ. ಕೊರಚ, ಕೊರಮ ಇವರು ಈಚಲು ಗರಿಯ ಪೊರಕೆ, ಚಾಪೆ, ಬುಟ್ಟಿಗಳನ್ನು ಹೆಣೆದು ಊರೂರಿಗೆ ತಿರುಗಿ ಮಾರಾಟ ಮಾಡುತ್ತಾರೆ. ಚಾಪೆ ಗುಡಿಸಲುಗಳನ್ನು ಊರ ಹೊರಗೆ ನಿರ್ಮಿಸಿ, ಬೇಕಾದಾಗ ಅವುಗಳನ್ನು ಕಿತ್ತು, ಎತ್ತು ಅಥವಾ ಕತ್ತೆಗಳ ಮೇಲೆ ಹೇರಿಕೊಂಡು ಬೇರೆ ಕಡೆ ಸಾಗಿಸುತ್ತಾರೆ.
 • ಆಂಧ್ರಪ್ರದೇಶದ ಇರ್ಕುಳ ಮತ್ತು ಎನ್ನಡಿಗಳು ಹಕ್ಕಿಗಳನ್ನು ಬೇಟೆಯಾಡಿ ಜೀವನ ನಡೆಸುತ್ತಾರೆ. ಬಿರ್ಹರ್, ಕ್ಹರಿಯಾ, ಚೆಂಚು, ಮಲಪನ್ತರಂ, ಕಾಡಾರರು, ಪಾಳಿಯನ್, ಪನಿಯನ್, ಕುರುಂಬ ಮುಂತಾದವರು ಗೆಡ್ಡೆಗೆಣಸನ್ನು ಅಗೆದು ಶೇಖರಿಸಲು ಸುತ್ತಮುತ್ತಲ ಕಾಡುಮೇಡುಗಳಲ್ಲಿ ಅಲೆಯುತ್ತಾರೆ. ನೀಲಗಿರಿಯ ತೋಡರು, ಉತ್ತರಭಾರತದ ಗಾಡ್ಡಿಗಳು ಪಶುಪಾಲನೆಯಿಂದ ಜೀವನ ನಡೆಸುತ್ತಾರೆ. ಗಾಡ್ಡಿಗಳು ತಮ್ಮ ಕುರಿಮಂದೆಯೊಡನೆ ಹಿಮಾಲಯದ ದಟ್ಟ ಪ್ರದೇಶಗಳಲ್ಲಿ ಹವಾಮಾನಕ್ಕನುಗುಣವಾಗಿ ಸಂಚರಿಸುತ್ತಾರೆ. ತೋಡರು ತಮ್ಮ ಎಮ್ಮೆ ಹಿಂಡಿನೊಡನೆ ಮೇವಿಗಾಗಿ ನೀಲಗಿರಿಯ ದಟ್ಟ ಮೈದಾನದಲ್ಲೆಲ್ಲ ಸಂಚರಿಸುತ್ತಾರೆ. ಗೊತ್ತಾದ ನೆಲೆಯಿಲ್ಲದೆ, ಚಿರಕಾಲ ಅಲೆಮಾರಿಯಾಗಿ ಅಥವಾ ಒಂದು ಸ್ಥಳಕ್ಕೆ ಎರಡನೆಯ ಸಲ ಹಿಂತಿರುಗಿ ಬರದೆ ಅಲೆಯುವ ಜನಾಂಗ ಯಾವುದೂ ಇಲ್ಲ.
 • ಹಂದಿಜೋಗಿಗಳು ಹಂದಿ ಮಂದೆಯೊಡನೆ ಊರೂರಿಗೆ ಅಲೆಯುತ್ತಾರೆ. ಕೆಲವೊಮ್ಮೆ ಭಿಕ್ಷೆ ಮಾಡುತ್ತಾರೆ. ಅವರು ನಾರು ಬೇರುಗಳಿಂದ ಕಷಾಯ ಮತ್ತು ಔಷಧಿ ಮಾಡುತ್ತಾರೆ. ಬುಡುಬುಡಿಕೆ ಜನಾಂಗ ದ ಗಂಡಸರು ಕೆಲವು ಹಕ್ಕಿಗಳ ಶಕುನ ಹಿಡಿದು, ಬೇರೆಯವರಿಗೆ ಶಕುನ ಹೇಳಿ ಧನಧಾನ್ಯ, ಬಟ್ಟೆಬರೆಗಳನ್ನು ಸಂಪಾದಿಸುತ್ತಾರೆ. ಇದಕ್ಕಾಗಿ ಅವರು ಯಾವಾಗಲೂ ಊರೂರು ಸುತ್ತುತ್ತಾರೆ.
 • ಕರ್ನಾಟಕ ರಾಜ್ಯದಲ್ಲಿ ಅಲೆಮಾರಿ ಜೀವನ ನಡೆಸುವ ಕೆಲವು ಜನಾಂಗಗಳಿವೆ. ಅನೇಕ ದಶಕಗಳ ಹಿಂದೆ ಲಂಬಾಣಿ, ಮಣ್ಣು ಒಡ್ಡರು, ಕೊರಚ, ಕೊರಮ, ಬುಡಬುಡಿಕೆ, ಮೊಂಡರು, ಡೊಂಬರು, ಹಾವಾಡಿಗರು, ಶಿಳ್ಳೆಕ್ಯಾತ, ಹಂದಿಜೋಗಿ, ಸೋಲಿಗರು, ಇರುಳಿಗರು, ಯರವರು, ಮುಂತಾದವರೆಲ್ಲ ಅಲೆಮಾರಿ ಜೀವನವನ್ನೇ ಅವಲಂಬಿಸಿದ್ದರು. ಇತ್ತೀಚೆಗೆ ಈ ಜನಾಂಗಗಳಲ್ಲಿ ಅನೇಕರು ಸ್ಥಿರಜೀವನ ನಡೆಸಲು ಸರ್ಕಾರ ವಸತಿ ಮತ್ತು ಸಣ್ಣಪುಟ್ಟ ಕೈಗಾರಿಕೆ ವಗೈರೆ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ. ಆದರೂ ಈ ಜನಾಂಗದವರೆಲ್ಲ ಅಲೆಯುವುದನ್ನು ಸಂಪುರ್ಣ ಬಿಟ್ಟಿಲ್ಲ. ಜೀವನೋಪಾಯಕ್ಕಾಗಿ ಅಲೆಯುವ ಈ ಜನ ಏನಾದರೊಂದು ಕಸುಬನ್ನು ಅವಲಂಬಿಸಿಯೇ ಇರುತ್ತಾರೆ. ಉದಾಹರಣೆಗಾಗಿ, ಲಂಬಾಣಿಗಳು ಮೊದಲಿಗೆ ಉಪ್ಪು ಮುಂತಾದ್ದನ್ನು ಎತ್ತುಗಳ ಮೇಲೆ ಸಾಗಿಸಿ ಮಾರಾಟ ಮಾಡಲು ಸ್ಥಳದಿಂದ ಸ್ಥಳಕ್ಕೆ ಅಲೆಯುತ್ತಿದ್ದರು. ಈಗಲಾದರೂ ಅವರು ಬೇರೆ ಜನರೊಂದಿಗೆ ಸೇರದೆ, ಪ್ರತ್ಯೇಕ ತಾಂಡಗಳನ್ನು ನಿರ್ಮಿಸಿಕೊಂಡು ವ್ಯವಸಾಯ ಮಾಡುತ್ತಾರೆ. ಲಂಬಾಣಿ ಹೆಂಗಸರು ಗುಡ್ಡಗಾಡಿನಲ್ಲಿ ಸೌದೆ, ಹಣ್ಣುಹಂಪಲನ್ನು ಕೂಡಿಟ್ಟು, ಹಳ್ಳಿಗಳಲ್ಲಿ ಮಾರಿ, ಹಣ, ಧಾನ್ಯ ಸಂಪಾದಿಸುತ್ತಾರೆ. ಡೊಂಬರು ಅನೇಕ ತರದ ತಮಾಷೆ ಆಟಗಳನ್ನು ಜನರಿಗೆ ತೋರಿಸುತ್ತ ಊರಿಂದೂರಿಗೆ ಗುಂಪುಗಳಲ್ಲಿ ಅಲೆಯುತ್ತ ಅನ್ನ ಬಟ್ಟೆ ಸಂಪಾದಿಸುತ್ತಾರೆ. ಹಾವಾಡಿಗರೂ ಹಾಗೆಯೇ. ಕಿಳ್ಳೇಕ್ಯಾತರೂ ಶಿಳ್ಳೆಕ್ಯಾತ ಬೊಂಬೆ ಆಟ ಆಡಿಸುತ್ತಾರೆ; ಅಲ್ಲದೆ ರಾಮಾಯಣ, ಮಹಾಭಾರತದಿಂದ ಆರಿಸಿದ ಕಥಾವಸ್ತುಗಳನ್ನು ಬಯಲಾಟ ರೂಪದಲ್ಲಿ ಆಡಿ, ಹಳ್ಳಿಗರಿಗೆ ಮನರಂಜನೆ ಒದಗಿಸುತ್ತಾರೆ. ಇವರ ಹೆಂಗಸರು ಹಚ್ಚೆ ಹಸುರು ಹಾಕುತ್ತಾರೆ, ಹಂದಿ ಸಾಕುತ್ತಾರೆ ಮತ್ತು ಕೊರವಂಜಿಗಳಾಗಿ ಭವಿಷ್ಯ ಹೇಳುತ್ತಾರೆ.

ಇವರಲ್ಲದೆ ಹೆಗ್ಗಡದೇವನಕೋಟೆ, ನೀಲಗಿರಿ, ವೈನಾಡು ಮತ್ತು ಕೇರಳದ ಕೆಲವೆಡೆಗಳಲ್ಲಿ ಕಾಡು ಕುರುಬರು, ಕುರುಂಬರು ಮತ್ತು ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿರುವ ಹಕ್ಕಿಪಿಕ್ಕಿ ಜನಾಂಗದವರು ಅಲೆಮಾರಿಜೀವನ ನಡೆಸುವರು. ಹಕ್ಕಿಪಿಕ್ಕಿ ಯವರಿಗೆ ಹಕ್ಕಿಗಳನ್ನು ಬೇಟೆಯಾಡುವುದೇ ಮುಖ್ಯ ಕಸಬು.

 • ಹೆಗ್ಗಡದೇವನಕೋಟೆ ಕಡೆ ಇತ್ತೀಚೆಗೆ ಸ್ಥಿರ ವಸತಿಗಳಲ್ಲಿರುವವರೆಂದರೆ ಕಾಡು ಕುರುಬ ರ ಬುಡಕಟ್ಟಿನವರು. ಇವರೂ ಹಿಂದೆ ಅಲೆಮಾರಿಗಳಾಗಿದ್ದರು. ಕಾಡುಕುರುಬರಲ್ಲಿ ಬೆಟ್ಟಕುರುಬರು, ಜೇನುಕುರುಬರೆಂಬ ಪಂಗಡಗಳುಂಟು. ಬೆಟ್ಟಕುರುಬರಲ್ಲಿ ಆನೆ, ಬೇವು ಮತ್ತು ಕೊಳ್ಳಿ ಎಂಬ ಶಾಖೆಗಳಿವೆ. ಈ ಗುಂಪುಗಳ ಮಧ್ಯೆ ಊಟೋಪಚಾರ ನಡೆದರೂ ಹೆಣ್ಣು ಕೊಟ್ಟು ತರುವುದಿಲ್ಲ.

ಕಾಡಿನ ಮಧ್ಯದಲ್ಲಿ ನೀರಿರುವ ಕಡೆ ಗಿಡಮರಗಳನ್ನು ಕಡಿದು ಹಾಕಿ, ವಸತಿಗಾಗಿ ಹುಲ್ಲು ಎಲೆ ಮನೆಗಳನ್ನು ಈ ಜನ ಕಟ್ಟುತ್ತಾರೆ. ಇವರ ಮನೆಯಲ್ಲಿನ ಮುಖ್ಯ ಪದಾರ್ಥಗಳೆಂದರೆ ಹುಲ್ಲು ಚಾಪೆ, ಮಡಕೆ-ಕುಡಿಕೆ, ಬಿದಿರು ಕೊಳವೆ ಮತ್ತು ಒಂದೆರಡು ಹಿತ್ತಾಳೆ ಪಾತ್ರೆಗಳು. ಒಂದು ಸಂಸಾರದಲ್ಲಿ ಗಂಡ ಹೆಂಡತಿ ಮತ್ತು ಮಕ್ಕಳು ಇರುತ್ತಾರೆ. ಹೆಂಗಸರು ಮಕ್ಕಳ ಯೋಗಕ್ಷೇಮ ನೋಡಿಕೊಂಡು ಮನೆ ಕೆಲಸ ಮಾಡಿಕೊಂಡು, ಜೊತೆಗೆ ತಿನ್ನಲು ಯೋಗ್ಯವಾದ ಗೆಡ್ಡೆಗೆಣಸು ತಂದು ಗಂಡಸರು ತಂದ ಆಹಾರದಲ್ಲಿ ಕಡಿಮೆ ಬಿದ್ದುದನ್ನು ಈ ವಿಧದಲ್ಲಿ ತುಂಬುತ್ತಾರೆ. ಕಾಡುಕುರುಬರಿಗೆ ಮಾಟ, ಮಂತ್ರ, ಮಾಯಾಜಾಲಗಳಲ್ಲಿ ನಂಬಿಕೆಯಿದೆ. ಇವರೂ ಹಿಂದೂಗಳ ಹಾಗೆ ಮಡಿ ಮೈಲಿಗೆ ಆಚರಿಸುತ್ತಾರೆ. ಮೈನೆರೆದ ಹುಡುಗಿಯರು, ಮುಟ್ಟಾದ ಹೆಂಗಸರು ಕೆಲವು ದಿನ ಪ್ರತ್ಯೇಕವಾಗಿರುತ್ತಾರೆ. ಕಾಡು ಕುರುಬರು ಯಾವಾಗಲೂ ಚಟುವಟಿಕೆಯಿಂದಿರುತ್ತಾರೆ. ಹಾಗಿಲ್ಲದಿದ್ದರೆ ಅವರ ಜೀವನ ಸಾಗದು. ಇತ್ತೀಚೆಗೆ ಸರ್ಕಾರದ ಅರಣ್ಯಇಲಾಖೆಯ ಪರವಾಗಿ, ಕಾಡಿನಲ್ಲಿ ಮರ ಕಡಿಯುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಾರೆ. ಹೀಗೆ ಕೂಲಿನಾಲಿ ಮಾಡಿ, ಸಂಪಾದಿಸಿ ಹೊಟ್ಟೆ ತುಂಬಿಕೊಳ್ಳುತ್ತಾರಲ್ಲದೆ ಸಾಧಾರಣವಾಗಿ ಭೂಮಿ ಸಾಗುವಳಿ ಮಾಡಲು ಮುಂದೆ ಬಂದಿಲ್ಲ. ಕೆಲವೊಮ್ಮೆ ಇವರು ವಾಸಿಸುವ ಗುಡಿಸಲಿನ ಸುತ್ತಮುತ್ತಲ ನೆಲ ಅಗೆದು, ರಾಗಿ ಮುಂತಾದವುಗಳನ್ನು ಅಲ್ಪ ಪ್ರಮಾಣದಲ್ಲಿ ಬೆಳೆದುಕೊಳ್ಳುತ್ತಾರೆ. ಜೇನು, ಮರದ ಅಂಟು, ಕಾಡಿನಲ್ಲಿ ಸಿಕ್ಕುವ ಮತ್ತಿತರ ಪದಾರ್ಥಗಳನ್ನು ಶೇಖರಿಸಿ, ಹಳ್ಳಿಗರಿಗೆ ಮಾರಿ ಆಹಾರ ಧಾನ್ಯ, ಬಟ್ಟೆಬರೆ ಮುಂತಾದುವುಗಳನ್ನು ಕೊಂಡುಕೊಳ್ಳುತ್ತಾರೆ. ಇಷ್ಟೇ ಅಲ್ಲದೆ ಕಾಡು ಪ್ರಾಣಿಗಳ ಜಾಡು ಹಿಡಿದು ಪತ್ತೆಹಚ್ಚಿ ಬೇಟೆಯಾಡುವುದರಲ್ಲೂ ಇವರು ನಿಪುಣರು. ಇವರ ಬೇಟೆಯ ಕ್ರಮಗಳು, ಬೇಟೆಯಲ್ಲಿ ಇವರಿಗಿರುವ ಜಾಣ್ಮೆ ಎಂಥವರನ್ನಾದರೂ ಬೆರಗುಗೊಳಿಸುತ್ತದೆ. ಇವರು ಕಾಡೆಮ್ಮೆಯ ಮಾಂಸ ಒಂದನ್ನು ಬಿಟ್ಟರೆ ಉಳಿದ ಎಲ್ಲ ಪ್ರಾಣಿಗಳ ಮಾಂಸವನ್ನೂ ತಿನ್ನುತ್ತಾರೆ. ಬಿದಿರ ಕಳಲೆ, ಗೆಡ್ಡೆಗೆಣಸುಗಳನ್ನು ಅನೇಕ ಸಲ ಜೇನುತುಪ್ಪದೊಡನೆ ಬೆರೆಸಿಕೊಂಡು ತಿನ್ನುತ್ತಾರೆ. ಕಾಡಿನಲ್ಲಿರುವ ಜೇನಿನಿಂದ ಯಥೇಚ್ಛವಾಗಿ ತುಪ್ಪ, ಮೇಣ ಮುಂತಾದುವನ್ನು ಶೇಖರಿಸುತ್ತಾರೆ.

                                     

2. ಏಷ್ಯಾ ಖಂಡದಲ್ಲಿ ಕಂಡುಬರುವ ಅಲೆಮಾರಿ ಜನಾಂಗಗಳು

ಪಶುಪಾಲನೆ ಎಲ್ಲ ಕಡೆಯೂ ಒಂದೇ ರೀತಿಯಾಗಿರದೆ, ಆಯಾ ಪ್ರದೇಶದ ಭೌಗೋಳಿಕ ಪರಿಸ್ಥಿತಿಗೆ ಹೊಂದಿಕೊಂಡಿರುತ್ತದೆ. ಪಶುಪಾಲಕರು ಉತ್ತರ ಶೀತವಲಯದ ತಂಡ್ರ ಪ್ರದೇಶ, ಎತ್ತರ ಪ್ರಸ್ಥಭೂಮಿಯ ಹುಲ್ಲುಗಾವಲು ಪ್ರದೇಶ, ಮರುಭೂಮಿಗಳು, ಉಷ್ಣವಲಯದ ಸವನ್ನ ಹುಲ್ಲುಗಾವಲು ಪ್ರದೇಶಗಳಲ್ಲಿ ಅಲೆಮಾರಿಗಳಾಗಿ ವಾಸಿಸುತ್ತಾರೆ. ಉಷ್ಣ ಅಥವಾ ಸಮಶೀತೋಷ್ಣವಲಯದ ಕಾಡುಗಳಲ್ಲಿ ಹುಳುಹುಪ್ಪಟೆಗಳ ಹಾವಳಿಯಿಂದಲೂ ಹುಲ್ಲಿನ ಅಭಾವದಿಂದಲೂ ಪಶುಪಾಲನೆ ಕಷ್ಟವಾಗುತ್ತದೆ. ಏಷ್ಯ, ಆಫ್ರಿಕ ಖಂಡಗಳಲ್ಲಿ ಹಲವು ಬಗೆಯ ಪಶುಪಾಲನಾ ವಿಧಾನಗಳು ಕಂಡುಬರುತ್ತವೆ.

 • ಉತ್ತರ ಅರೇಬಿಯದ ರುವಾಲ ಬಿದೂಯಿನ್ ಜನಾಂಗದವರು ಒಂಟೆ, ಕುರಿ, ಮೇಕೆ ಮತ್ತು ಕುದುರೆಗಳನ್ನು ಸಾಕುತ್ತಾರೆ. ಈ ಪ್ರಾಣಿಗಳಿಗೆ ಹುಲ್ಲು ನೀರು ಯಥೇಚ್ಛವಾಗಿ ಸಿಕ್ಕುವ ನಿರ್ದಿಷ್ಟ ಪ್ರದೇಶಗಳನ್ನು ಹುಡುಕಿ ನಡೆಯುತ್ತಾರೆ. ಒಳಬೆಂಗಾಡು ಹುಲ್ಲುಗಾವಲಿನಲ್ಲಿ ವರ್ಷದಲ್ಲಿ 8-10 ತಿಂಗಳು ವಾಸಮಾಡಿ, ಬೇಸಗೆಯ ಬೇಗೆಯನ್ನು ತಪ್ಪಿಸಿಕೊಳ್ಳಲು ತಮ್ಮ ಪ್ರಾಣಿಗಳಿಗೆ ಹುಲ್ಲು ನೀರನ್ನು ಒದಗಿಸಲೂ ತಮ್ಮ ಜೀವನಕ್ಕೆ ಆವಶ್ಯಕವಾದ ಸಾಮಗ್ರಿಗಳನ್ನು ಕೊಳ್ಳಲೂ ಹಳ್ಳಿಗಳ ಕಡೆಗೆ ಧಾವಿಸುತ್ತಾರೆ.

ಇವರಿಗೆ ಒಂಟೆಯೇ ಬಹು ಮುಖ್ಯ ಪ್ರಾಣಿ. ಒಂಟೆಯ ಹಾಲೇ ವರ್ಷದಲ್ಲಿ ಅನೇಕ ತಿಂಗಳು ಅತಿ ಮುಖ್ಯವಾದ ಆಹಾರ. ತಂಬಾಲು ಮತ್ತು ಹುಳಿ ಹಾಲನ್ನು ಮೊಸರು ಕುಡಿಯುತ್ತಾರೆ. ಒಂಟೆಹಾಲಿನಲ್ಲಿ ಬೆಣ್ಣೆ ಮುಂತಾದ ಯಾವ ಪದಾರ್ಥವನ್ನೂ ಮಾಡಲಾಗುವುದಿಲ್ಲ. ಚರ್ಮ ಮತ್ತು ಕೂದಲುಗಳಿಂದ ಚೀಲ, ಹಗ್ಗ ಮುಂತಾದ ನಿತ್ಯ ಬಳಕೆಯ ವಸ್ತುಗಳನ್ನು ತಯಾರಿಸುತ್ತಾರೆ. ಒಂಟೆಗಳನ್ನು ಸವಾರಿ ಮಾಡಲೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬಿಡಾರ ಬದಲಾಯಿಸಿದಾಗ ತಮ್ಮ ಸರಕುಗಳನ್ನು ಸಾಗಿಸಲೂ ಉಪಯೋಗಿಸುತ್ತಾರೆ. ಇವರು ಮಹಮದೀಯರು. ಇವರು ಪಿತೃ ವಂಶಾವಳಿಯನ್ನು ಅನುಸರಿಸುತ್ತಾರೆ. ಸಹೋದರ ಮಕ್ಕಳ ಪ್ಯಾರಲಲ್ ಕಸಿನ್ಸ್‌ ಮದುವೆಗೆ ಬಹಳ ಪ್ರಾಶಸ್ತ್ಯ ಕೊಡುತ್ತಾರೆ. ಸ್ತ್ರೀಯರು ಪಿತ್ರಾರ್ಜಿತ ಮತ್ತು ಸ್ವಯಾರ್ಜಿತವಾಗಿ ಒಂಟೆಯ ಮಾಲಿಕತ್ವವನ್ನು ಹೊಂದಿರಬಹುದು. ಈ ಆಸ್ತಿ ಆಕೆಯ ಅನಂತರ ಗಂಡ ಮತ್ತು ಮಕ್ಕಳಿಗೆ ಸೇರುತ್ತದೆ. ಅನೇಕ ಮನೆತನಗಳು ಸೇರಿ ಒಂದು ಬುಡಕಟ್ಟಾಗುತ್ತದೆ. ಪ್ರತಿಯೊಂದು ಬುಡಕಟ್ಟಿಗೂ ಒಬ್ಬ ಮುಖ್ಯಸ್ಥನಿರುತ್ತಾನೆ.

 • ಏಷ್ಯದ ವಾಯವ್ಯದಲ್ಲಿರುವ ಕಜಾಕ್ ಜನಾಂಗದವರು ಕುದುರೆ, ಕುರಿ, ಮೇಕೆ, ದನ ಮತ್ತು ಒಂಟೆಗಳನ್ನು ಸಾಕುತ್ತಾರೆ. ಕುದುರೆ, ಅದರಲ್ಲೂ ಹೆಣ್ಣು ಕುದುರೆ ಇವರಿಗೆ ಅತಿ ಮುಖ್ಯವಾದ ಪ್ರಾಣಿ. ಕುದುರೆ ಹಾಲಿನಿಂದ ಕುಮಿಸ್ ಎಂಬ ಮಾದಕ ಪಾನೀಯವನ್ನು ತಯಾರಿಸುತ್ತಾರೆ. ಇವರು ಒಳ್ಳೆಯ ಕುದುರೆ ಸವಾರರು. ಆದರೆ ಹೆಣ್ಣು ಕುದುರೆ ಮೇಲೆ ಸವಾರಿ ಮಾಡುವುದಿಲ್ಲ. ಕೆಲವು ಕುದುರೆಗಳನ್ನು ಪವಿತ್ರವಾದವುಗಳೆಂದು ಯಾವ ಕೆಲಸಕ್ಕೂ ಉಪಯೋಗಿಸುವುದಿಲ್ಲ. ಕುದುರೆಯ ಮಾಂಸಕ್ಕೆ ಬಹಳ ಬೆಲೆ ಕೊಡುತ್ತಾರೆ. ಕುದುರೆಯ ಚರ್ಮದಿಂದ ಜೀನನ್ನೂ ಕೂದಲಿನಿಂದ ಹಗ್ಗವನ್ನೂ ತಯಾರಿಸುತ್ತಾರೆ. ವರ್ಷದಲ್ಲಿ ಸುಮಾರು ಆರು ಸಲ ವಸತಿ ಬದಲಾಯಿಸುತ್ತಾರೆ. ಇವರೂ ಇಸ್ಲಾಂ ಮತಾವಲಂಬಿಗಳು. ಸ್ತ್ರೀಯರು ಮುಖಪರದೆಯನ್ನು ಧರಿಸುವುದಿಲ್ಲ.
 • ಮಂಗೋಲಿಯಾದ ವಾಯವ್ಯ ಪ್ರಸ್ಥಭೂಮಿಯಲ್ಲಿ ಕಾಲ್‌ಮಕ್‌ ಎಂಬ ತುರ್ಕಿ ಮಾತನಾಡುವ ಮಂಗೋಲಿಯನ್ ಬುಡಕಟ್ಟಿಗೆ ಸೇರಿದ ಜನರಿದ್ದಾರೆ. ಇವರು ಕುರಿ, ಮೇಕೆ, ದನ ಮತ್ತು ಕುದುರೆಗಳನ್ನು ಸಾಕುತ್ತಾರೆ. ಇವರಿಗೆ ಈ ಪ್ರಾಣಿಗಳ ಹಾಲು, ಮಾಂಸ, ಚರ್ಮ ಮತ್ತು ಉಣ್ಣೆ ಎಲ್ಲವೂ ಜೀವನಾಧಾರ ವಸ್ತುಗಳು. ಕಜಾಕರ ಹಾಗಲ್ಲದಿದ್ದರೂ ಇವರೂ ಪ್ರಾಣಿಗಳ ಹಿಂಡಿನೊಡನೆ ಮೇವನ್ನು ಹುಡುಕಿಕೊಂಡು ಸ್ಥಳದಿಂದ ಸ್ಥಳಕ್ಕೆ ಅಲೆಯುತ್ತಾರೆ. ಹೆಂಗಸರು ಮನೆಯ ಕೆಲಸಗಳನ್ನೂ ಗಂಡಸರೂ ಮಂದೆ ಕಾಯುವ ಕೆಲಸವನ್ನೂ ಮಾಡುತ್ತಾರೆ. ಏಷ್ಯದಲ್ಲೇ ಅತಿ ಚುರುಕಾದ ಮತ್ತು ಬಾಳಿಕೆಯುಳ್ಳ ಕುದುರೆಗಳನ್ನು ಸಾಕುತ್ತಾರೆ. ಕುದುರೆಯೇ ಇವರ ಸರ್ವಸ್ವ.
 • ಏಷ್ಯದ ಉತ್ತರ ಭಾಗದಲ್ಲಿ ಕುದುರೆ ಮತ್ತು ದನಗಳು ಜೀವಿಸಲಾರದ ಕಡೆ ಹಿಮಸಾರಂಗಗಳನ್ನು ಸಾಕುತ್ತಾರೆ. ಇವರಲ್ಲದೆ ಬೇಟೆಯಾಡಿ ಮತ್ತು ಮೀನು ಹಿಡಿದು ಜೀವಿಸುವ ತುಂಗು ಜನಾಂಗದವರು ಚಳಿಗಾಲದಲ್ಲಿ ಹಿಮಸಾರಂಗಳ ತುಳಿತದಿಂದ ನೆಲ ಗಟ್ಟಿಯಾಗಿ ಹುಲ್ಲು ಬೆಳೆಯದಿರುವುದರಿಂದ, ಮೇವಿಗಾಗಿ ವಸತಿಗಳನ್ನು ಹುಡುಕಿಕೊಂಡು ಅಲೆಯುತ್ತಾರೆ. ಹಿಮಸಾರಂಗ ಇವರಿಗೆ ಅತಿ ಮುಖ್ಯವಾದ ಪ್ರಾಣಿ. ಅದನ್ನು ಸವಾರಿಗೂ ಸಾಮಾನು ಸಾಗಿಸಲೂ ಚಿಕ್ಕ ಬಂಡಿಯನ್ನು ಎಳೆಯಲೂ ಉಪಯೋಗಿಸುತ್ತಾರೆ. ಅದರ ಹಾಲನ್ನು ಕುಡಿಯುತ್ತಾರೆ. ಚರ್ಮವನ್ನು ಉಡುಪಿಗಾಗಿ ಬಳಸುತ್ತಾರೆ. ಹಿಮಸಾರಂಗ ಇವರ ಧರ್ಮ ಮತ್ತು ನಂಬಿಕೆಗಳಲ್ಲಿ ಮುಖ್ಯ ಸ್ಥಾನ ಗಳಿಸಿದೆ. ಹಿಮಸಾರಂಗಗಳನ್ನು ಮಾತ್ರ ಅತ್ಯಂತ ಪವಿತ್ರವೆಂದು ಯಾವುದಕ್ಕೂ ಉಪಯೋಗಿಸುವುದಿಲ್ಲ. ಈ ಪ್ರಾಣಿ ಮಾನವರಿಗೂ ದೇವತೆಗಳಿಗೂ ಸಂಬಂಧ ಕಲ್ಪಿಸುವ ದಿವ್ಯ ಸಾಧನವಾಗಿದ್ದು, ಆತ್ಮವನ್ನು ಸ್ವರ್ಗಕ್ಕೆ ಕರೆದೊಯ್ಯುವುದೆಂಬ ವಿಶಿಷ್ಟ ನಂಬಿಕೆಯೂ ಇದೆ. ವಿವಾಹಾದಿ ಮಂಗಳ ಕಾರ್ಯಗಳಲ್ಲೂ ಸಾವು ಮೊದಲಾದ ದುಃಖಸಮಯಗಳಲ್ಲೂ ಹಿಮಸಾರಂಗವನ್ನು ಆಹುತಿ ಕೊಟ್ಟು, ಅದರ ಮಾಂಸಭಕ್ಷಣೆ ಮಾಡುತ್ತಾರೆ.
 • ಖಿರ್‌ಘೀಜ್‌ ಜನಾಂಗದವರು ಕಜಾಕರನ್ನೇ ಹೋಲುತ್ತಾರೆ. ಕುದುರೆ ಮತ್ತು ಚಮರೀ ಮೃಗಗಳನ್ನು ಸಾಕುತ್ತಾರೆ. ಆಹಾರ ಮತ್ತು ಹುಲ್ಲನ್ನು ಹುಡುಕುತ್ತ ಸ್ಥಳ ಬದಲಾಯಿಸುತ್ತಿರುತ್ತಾರೆ. ಅವರಲ್ಲಿ ಬಡವ ಬಲ್ಲಿದರೆಂಬ ವರ್ಗಗಳಿಲ್ಲ. ಗುಂಪಿಗೊಬ್ಬ ಮುಖ್ಯಸ್ಥನಿರುತ್ತಾನೆ.

ತುಂಗು ಜನರಲ್ಲಿ ಜನಾಂಗದ ಮುಖ್ಯಸ್ಥನಿಲ್ಲ. ಆದರೆ ಬಣಗಳಿಗೆ ಮುಖ್ಯಸ್ಥನಿದ್ದಾನೆ. ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಬಡವ ಬಲ್ಲಿದರೆಂಬ ವರ್ಗಗಳಿಲ್ಲ. ಜನಾಂಗದ ಪ್ರತಿಯೊಬ್ಬನೂ ಸಮಾನಾಧಿಕಾರವುಳ್ಳವನಾಗಿರುತ್ತಾನೆ. ಬೇಟೆ ಮತ್ತು ಪಶುಪಾಲನೆಗಳಿಂದ ಜೀವಿಸುತ್ತಾರೆ. ಗಂಡಸು ಬೇಟೆಯಾಡಿ ಆಹಾರ ಸಂಪಾದನೆ ಮಾಡುತ್ತಾನೆ. ಪ್ರಾಣಿಗಳನ್ನು ಮೇಯಿಸಲು ಮೊದಲೇ ನಿರ್ಧರಿಸಲ್ಪಟ್ಟ ಪ್ರದೇಶಕ್ಕೆ ಬಿಡಾರವನ್ನು ಸಾಗಿಸುವ ಕಾರ್ಯವನ್ನು ಹೆಂಗಸು ಮಾಡುತ್ತಾಳೆ. ಗಂಡಸು ಬೇಟೆಯನ್ನು ಮುಗಿಸಿಕೊಂಡು ಬದಲಾಯಿಸಿದ ಹೊಸ ಬಿಡಾರಕ್ಕೆ ಬಂದು ಸೇರುತ್ತಾನೆ.

 • ತಂಡ್ರ ಪ್ರದೇಶದಲ್ಲಿರುವ ಸಮೋಯದ್ ಚೊಕ್‌ಚಿ ಮತ್ತು ಕಾರ್‌ಯಾಕ್‌ ಜನಾಂಗಗಳ ಮುಖ್ಯ ಕಸುಬು ಬೇಟೆಯಾಡುವುದು, ಜಿಂಕೆ ಹಿಮಸಾರಂಗಗಳನ್ನು ಸಾಕುವುದು. ಯಕುಚ್ ಮತ್ತು ಯುಕಾಫಿರ್ ಜನಾಂಗದವರು ಸ್ಕ್ಯಾಂಡಿನೇವಿಯದ ಲ್ಯಾಪ್ ಜನರಂತೆ ಹಾಲಿಗಾಗಿ ಹಿಮಸಾರಂಗಗಳನ್ನು ಸಾಕುತ್ತಾರೆ. ಪಶುಪಾಲನೆ ಮಾಡಿಕೊಂಡು ನೆಲೆಯಿಲ್ಲದೆ ಅಲೆಯುವುದೇ ಈ ಜನಾಂಗಗಳ ವೈಶಿಷ್ಟ್ಯ.
                                     

3. ಆಫ್ರಿಕ ಖಂಡದಲ್ಲಿ ಕಂಡುಬರುವ ಅಲೆಮಾರಿ ಜನಾಂಗಗಳು

ಆಫ್ರಿಕದ ಎಲ್ಲ ಭಾಗಗಳಲ್ಲೂ ಪಶುಪಾಲನೆಗಾಗಿ ಅಲೆಮಾರಿ ಜೀವನ ನಡೆಸುವ ಜನಾಂಗಗಳಿವೆ. ಪ್ರಸ್ಥಭೂಮಿಯ ಮೇಲಿರುವ ಟೊಂಗ, ಜೂಲು, ಲೋಜಿ ಮುಂತಾದವರು ಪಶುಪಾಲನೆ, ತೋಟಗಾರಿಕೆ, ವ್ಯವಸಾಯ ಮಾಡಿಕೊಂಡು ಹಳ್ಳಿಗಳನ್ನು ಕಟ್ಟಿಕೊಂಡು ಸ್ಥಿರಜೀವನ ನಡೆಸುತ್ತಾರೆ. ಇನ್ನು ಕೆಲವರು ಮುಖ್ಯವಾಗಿ ಪಶುಪಾಲನೆಯಿಂದಲೇ ಜೀವನ ಮಾಡುತ್ತಾರೆ. ಅವರಲ್ಲಿ ಬೇಜ, ಅಫರ್, ಸೋಮಾಲಿ, ನ್ಯೂಅರ್, ಡಿಂಕ, ನೈಜೀರಿಯದ ಫುಲಾನಿ, ಪೂರ್ವ ಆಫ್ರಿಕಾದ ಮಸೈ ಮತ್ತು ಉಗಾಂಡದ ಬಹಿಮ ಮುಖ್ಯರಾದವರು. ಉಗಾಂಡದಲ್ಲಿ ಸಾಗುವಳಿ ಮಾಡುವ ಬೈರು ಜನಾಂಗದವರು ಬಹಿಮರಿಗೆ ಅಡಿಯಾಳಾಗಿ ನಿಕೃಷ್ಟಜೀವನ ನಡೆಸುತ್ತಾರೆ.

 • ಫುಲಾನಿ ಗಳ ಮುಖ್ಯ ಸಂಪತ್ತು ದನ. ಸ್ವಲ್ಪ ಮಟ್ಟಿಗೆ ಕುರಿ ಮೇಕೆಗಳನ್ನು ಸಾಕುತ್ತಾರೆ. ಭೌಗೋಳಿಕ ವಾತಾವರಣದಲ್ಲುಂಟಾಗುವ ಬದಲಾವಣೆಗಳು ವಸಾಹತುಗಳ ಬದಲಾವಣೆಗೆ ಪ್ರೇರಕಶಕ್ತಿಗಳಾಗುತ್ತವೆ. ಜನರ ಮತ್ತು ಪ್ರಾಣಿಗಳ ಸಂಖ್ಯೆ, ಮೇವು ನೀರಿನ ಸೌಕರ್ಯ, ವ್ಯಾಪಾರದ ಅನುಕೂಲತೆ-ಇವು ಅಲೆಮಾರಿ ಜೀವನಕ್ಕೆ ಮುಖ್ಯವಾದ ಅಂಶಗಳು.

ಇವರು ಬೇಸಗೆ ಮತ್ತು ಚಳಿಗಾಲಕ್ಕೆ ಬೇರೆ ಬೇರೆ ವಸತಿಗಳನ್ನು ಕಲ್ಪಿಸಿಕೊಳ್ಳುತ್ತಾರೆ. ಸನ್ನಿವೇಶ ಮತ್ತು ಆಯಾ ಜನರ ಪದ್ಧತಿಯ ಅನುಕೂಲಕ್ಕೆ ಅನುಗುಣವಾಗಿ ಈ ವಸತಿಗಳ ಅಂತರವಿರುತ್ತದೆ. ಉದಾಹರಣೆಗಾಗಿ, 1951-52ರಲ್ಲಿ ಕೆಲವರು 40 ಕಿಮೀ ಮತ್ತೆ ಕೆಲವರು ನೂರಾರು ಕಿ.ಮೀ. ಅಂತರದಲ್ಲೂ ಇದ್ದರು. ಹಿಂದೆ, 1944ರಲ್ಲಿ ರಾಜಕೀಯ ಕಾರಣಗಳಿಂದಾಗಿ ಫುಲಾನಿ ಗುಂಪೊಂದು 770 ಕಿಮೀ ದೂರ ದನಗಳ ಹಿಂಡಿನೊಡನೆ ಮೇವು ನೀರಿಗಾಗಿ ಅಲೆದಿದ್ದುಂಟು. ಈ ಜನ ಬೇಸಗೆಯಲ್ಲಿ ಸಣ್ಣ ಸಣ್ಣ ಗುಂಪುಗಳಲ್ಲಿ ವಾಸಿಸುತ್ತಾರೆ. ಇದೇ ರೀತಿಯಾಗಿ, ಕರ್ನಾಟಕದ ಕಾಡುಗೊಲ್ಲರು ಕೂಡ ತಮ್ಮ ದನಕರುಗಳ ಮೇವು ನೀರಿಗಾಗಿ ಅಲೆದಾಡುವುದುಂಟು. ಮಳೆಗಾಲದಲ್ಲಿ ಒಟ್ಟಿಗೆ ಸೇರುತ್ತಾರೆ. ಮದುವೆ ಮುಂಜಿ ಮುಂತಾದ ವಿಶೇಷ ಕಾರ್ಯಗಳೆಲ್ಲ ಮಳೆಗಾಲದಲ್ಲಿಯೇ ನಡೆಯುವುವು. ಇವರಲ್ಲಿ ಸ್ತ್ರೀ ಪುರುಷರ ನಡುವೆ ಕೆಲಸದ ಹಂಚಿಕೆಯಿದೆ. ಮನೆಯ ಯಜಮಾನ ದನಗಳ ಮಾಲೀಕ; ಅವನ ಮಕ್ಕಳು ದನ ಮೇಯಿಸುತ್ತಾರೆ. ಸ್ತ್ರೀಯರು ಹಾಲು ಹೈನನ್ನು ತಯಾರಿಸಿ, ಮನೆಯ ಉಪಯೋಗಕ್ಕಾಗಿ ಮಿಕ್ಕಿದ್ದನ್ನು ಸಂತೆಯಲ್ಲಿ ಮಾರಿ ಧಾನ್ಯ ಮುಂತಾದುವನ್ನು ಕೊಳ್ಳುತ್ತಾರೆ. ಹಣದ ಆವಶ್ಯಕತೆಯಿದ್ದಾಗ ಮಾತ್ರ ದನಗಳನ್ನು ಮಾರುವುದುಂಟು. ಇವರು ಇಸ್ಲಾಂ ಧರ್ಮಾನುಯಾಯಿಗಳು. ವಿಶೇಷ ಸಮಾರಂಭದಲ್ಲಿ ಮಾತ್ರ ಮಾಂಸ ತಿನ್ನುತ್ತಾರೆ.

 • ಪೂರ್ವ ಆಫ್ರಿಕದ ಮಸೈ ಜನಾಂಗ ದವರೂ ಪಶುಪಾಲನೆಯಿಂದಲೇ ಜೀವನ ಸಾಗಿಸುತ್ತಾರೆ. ಕುರಿ, ಕತ್ತೆ ಮತ್ತು ಒಂಟೆಗಳನ್ನು ಸಾಕುತ್ತಾರೆ. ಬೇಸಗೆಯಲ್ಲಿ ದನಗಳ ಮೇವಿಗಾಗಿ ಅಲೆಯುತ್ತಾರೆ. ಒಂದು ಜಿಲ್ಲೆಯ ತರುಣ ಯೋಧರು ದನ ಕಾಯುವುದಲ್ಲದೆ ಬೇರೆ ನಾಡಿನ ದನಗಳನ್ನು ಕದಿಯುವುದರಲ್ಲೂ ತೊಡಗುತ್ತಾರೆ.

ಮಸೈ ಜನರು ಪಶುಪಾಲನೆಯಿಂದಾಗಿ ಬೇಟೆಯನ್ನೂ ಭೂಮಿ ಉಳುವುದನ್ನೂ ಕಡೆಗಣಿಸಿದ್ದಾರೆ. ಎಷ್ಟೊ ಜನ ವ್ಯವಸಾಯಗಾರರನ್ನು ದನಗಳ ಮೇವಿಗಾಗಿ ಜಮೀನು ಬಿಡಿಸಿ ಓಡಿಸಿದ್ದಾರೆ. ಇವರು ಸವಾರಿ ಮಾಡಲು ಅಥವಾ ಸಾಮಾನು ಸಾಗಿಸಲು ದನಗಳನ್ನು ಉಪಯೋಗಿಸುವುದಿಲ್ಲ. ಹಾಲು, ಬೆಣ್ಣೆ, ಚರ್ಮಕ್ಕಾಗಿ ಅವನ್ನು ಸಾಕುತ್ತಾರೆ; ಬಳಸಿ ಮಿಕ್ಕಿದ್ದನ್ನು ನೆರೆಯವರಿಗೆ ಧಾನ್ಯಕ್ಕಾಗಿ ಮಾರುತ್ತಾರೆ. ಸಮಾರಂಭಗಳಲ್ಲಿ ಮತಾಚರಣೆಗಳಲ್ಲಿ ಮಾತ್ರ ದನಗಳನ್ನು ಕೊಂದು ಮಾಂಸವನ್ನು ತಿನ್ನುತ್ತಾರೆ. ಇವರು ಮಾಂಸ ಮತ್ತು ಹಾಲನ್ನು ಒಂದೇ ದಿನ ಸೇವಿಸುವುದಿಲ್ಲ. ಅಲ್ಲದೆ ಮಾಂಸದಡಿಗೆಯನ್ನು ವಸತಿಯಲ್ಲಿ ತಯಾರಿಸುವುದಿಲ್ಲ. ಪ್ರಾಣಿಗಳನ್ನು ಕೊಲ್ಲದೆಯೇ ಅವುಗಳ ರಕ್ತನಾಳಗಳಿಂದ ರಕ್ತ ಶೇಖರಿಸುವ ವಿಶಿಷ್ಟ ವಿಧಾನಗಳಿಂದ, ದನ ಮತ್ತು ಕುರಿಗಳ ರಕ್ತವನ್ನು ವಿಶೇಷವಾಗಿ ಉಪಯೋಗಿಸುತ್ತಾರೆ. ಆಫ್ರಿಕದಲ್ಲಿ ಪಶುಪಾಲನೆಯಿಂದ ಜೀವಿಸುವ ಎಲ್ಲ ಜನಾಂಗಗಳ ಸಾಮಾಜಿಕ ಜೀವನದಲ್ಲೂ ದನಗಳ ಪಾತ್ರ ಬಹು ಮುಖ್ಯವಾದದ್ದು. ದನಗಳನ್ನು ಮದುವೆಯ ಕಾಲದಲ್ಲಿ ಕನ್ಯಾಶುಲ್ಕವಾಗಿ ಹೆಣ್ಣಿನ ಕಡೆಯವರಿಗೂ ಮತ್ತು ಉಳಿದ ಸಂದರ್ಭಗಳಲ್ಲಿ ಉಡುಗೊರೆಯಾಗಿಯೂ ಕೊಡುತ್ತಾರೆ.

ಪಶುಪಾಲನ ವೃತ್ತಿಯಿಂದ ಜೀವಿಸುವವರ ಸಂಪತ್ತೆಂದರೆ ದನದ ಹಿಂಡು, ಕುರಿಯ ಮಂದೆ ಮುಂತಾದುವು. ಹಾಲು ಹೈನುಗಳ ಆಧಾರದಿಂದ ಜೀವನ ಸಾಗಿಸುವ ಅವರ ಜೀವನ ಬೇಟೆಯಾಡುವವರ ಜೀವನಕ್ಕಿಂತ ಭದ್ರವಾಗಿರುತ್ತದೆ. ಸ್ಥಿರ ವ್ಯವಸಾಯ ಜೀವನಕ್ಕಿಂತ ಪಶುಪಾಲನೆಯ ಜೀವನ ಯಾವಾಗಲೂ ಕೀಳಾಗಿ ಕುಂದು ಕೊರತೆಗಳಿಂದಲೇ ಕೂಡಿರುವುದಿಲ್ಲ. ಪಶುಪಾಲಕರ ಜೀವನ ವೈವಿಧ್ಯಪುರ್ಣವಾದದ್ದು. ಅವರು ವಿವಿಧ ಧರ್ಮಾವಲಂಬಿಗಳು. ಆರ್ಥಿಕ ಜೀವನದಷ್ಟೇ ರಾಜಕೀಯ ಜೀವನವೂ ವೈವಿಧ್ಯದಿಂದ ಕೂಡಿದೆ. ತಂದೆಯೇ ಸಂಪುರ್ಣ ಸರ್ವಾಧಿಕಾರಿಯಾಗಿರುವ ಜನಾಂಗವಾಗಲೀ ಸ್ತ್ರೀಗೆ ಏನೇನೂ ಸ್ಥಾನಮಾನಗಳನ್ನು ಕೊಡದಿರುವ ಜನಾಂಗವಾಗಲೀ ಅತಿ ವಿರಳ. ಹಾಗೆಯೇ ಬಹುಪತ್ನಿತ್ವಕ್ಕೆ ಪಶುಪಾಲನೆಯೇ ಕಾರಣವೆಂದು ಹೇಳಲಸಾಧ್ಯ. ಅಲೆದಾಡಿ, ಪಶುಪಾಲನೆಯಿಂದ ಜೀವಿಸಿದರೂ ಪ್ರಪಂಚದ ಯಾವ ಮಾನವವರ್ಗವೂ ನಿರಂತರವೂ ಒಂಟಿಯಾಗಿ, ಬೇರೆಯವರೊಂದಿಗೆ ಯಾವಾಗಲೂ ಬೆರೆಯದಂತೆ ಇಲ್ಲ. ಹಲವಾರು ಜೀವನ ನಿರ್ವಹಣ ಮಾರ್ಗಗಳು ಪರಸ್ಪರ ವಿರೋಧಾಭಾಸದಿಂದ ಘರ್ಷಣೆಗೊಳಗಾಗಿ ನಾಶವಾಗದೆ, ಒಂದರೊಡನೊಂದು ಸಮರಸವಾಗಿ ಹೊಂದಿಕೊಂಡು, ಸಹಬಾಳ್ವೆಗೆ ಬುನಾದಿ ಹಾಕಿಕೊಟ್ಟಿರುವುದು, ಮಾನವನ ಅಲೆಮಾರಿ ಜೀವನವನ್ನು ಪರಿಶೀಲಿಸಿದಾಗ ಗೋಚರವಾಗದಿರದು. ಅಲೆಮಾರಿಗಳನ್ನು ಅನಾಗರಿಕ, ಅಸಂಸ್ಕೃತ ಜನಾಂಗವೆನ್ನಲು ಬರುವುದಿಲ್ಲ. ನಾಗರಿಕ ಜೀವನದಲ್ಲಿ ಕಾಣೆಯಾಗಿರುವ ಅನೇಕ ಗುಣಗಳು ಅವರಲ್ಲಿವೆ. ನಾಗರಿಕರಿಗಿಂತ ಹೆಚ್ಚಾಗಿ ಅವರು ಪ್ರಕೃತಿಗೆ ಹೊಂದಿ ನಡೆಯುವವರಾಗಿದ್ದಾರೆ. ಅವರ ದೇಹದಾರ್ಢ್ಯ, ಸಾಮಾನ್ಯಜೀವನಕ್ರಮ, ಶ್ರಮಜೀವನ, ವಿಶ್ವಾಸ, ಅನುಭವದಿಂದ ಬಂದಿರುವ ಅವರ ಅನೇಕ ಸಾಮಾಜಿಕ ಹಾಗೂ ನೈತಿಕ ಕಟ್ಟಳೆಗಳು ಇತರರಿಗೆ ಮಾದರಿಯಾಗಬೇಕು. ಈ ದೃಷ್ಟಿಯಿಂದ ಅವರನ್ನು, ಅವರ ಜೀವನವನ್ನು ಅಭ್ಯಸಿಸುವುದು ಅಗತ್ಯ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →